ಅಪ್ಸರ ಕೊಂಡ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಪಟ್ಟಣವಾದ ಹೊನ್ನಾವರದಲ್ಲಿರುವ ಒಂದು ಜನಪ್ರಿಯ ಪ್ರವಾಸಿ ತಾಣವಾಗಿದೆ. ಇದು ತನ್ನ ಪ್ರಾಚೀನ ಕಡಲತೀರಗಳು, ಮೋಡಿಮಾಡುವ ಜಲಪಾತಗಳು ಮತ್ತು ರಮಣೀಯ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ‘ಅಪ್ಸರ ಕೊಂಡ’ ಎಂದರೆ ಅಪ್ಸರೆಯರ ಕೊಳ ಎಂದರ್ಥ. ಈ ಸ್ಥಳವು ಹಚ್ಚ ಹಸಿರಿನ ಕಾಡುಗಳು ಮತ್ತು ಬಂಡೆಗಳಿಂದ ಆವೃತವಾಗಿದ್ದು, ಅರಬ್ಬೀ ಸಮುದ್ರದ ಸುಂದರವಾದ ನೋಟವನ್ನು ನೀಡುತ್ತದೆ.
ಪರಿವಿಡಿ:
ಅಪ್ಸರ ಕೊಂಡ ತಲುಪುವುದು ಹೇಗೆ?
ಹೊನ್ನಾವರದ ಬಸ್ ನಿಲ್ದಾಣದಿಂದ ಕೇವಲ 8 ಕಿಲೊಮೀಟರ್ ದೂರದಲ್ಲಿರುವ ಈ ತಾಣಕ್ಕೆ ಹೋಗಲು ಎರಡು ಮಾರ್ಗಗಳಿವೆ. ಒಂದು ಕಿರಿದಾದ ಮಾರ್ಗ. ಈ ಮಾರ್ಗವಾಗಿ ಬೀಚ್ ಸಮೀಪದಿಂದ ಮೆಟ್ಟಿಲುಗಳನ್ನು ಹತ್ತಿ ಅಪ್ಸರಕೊಂಡ ತಲುಪಬಹುದು. ಇನ್ನೊಂದು ಮಾರ್ಗವೂ ರಾಷ್ಟೀಯ ಹೆದ್ದಾರಿ 66 ರಿಂದ ಕೇವಲ 50 ಮೀಟರ್ ಅಷ್ಟು ದಾರಿಯಲ್ಲಿ ಸಾಗಿದರೆ ಅಪ್ಸರ ಕೊಂಡವನ್ನು ತಲುಪಬಹುದು.
ಸ್ಥಳ: ಅಪ್ಸರ ಕೊಂಡ, ಹೊನ್ನಾವರ ತಾಲೂಕು, ಉತ್ತರ ಕನ್ನಡ ಜಿಲ್ಲೆ, ಕರ್ನಾಟಕ
ಸಮಯ: ಬೆಳಿಗ್ಗೆ 6 ರಿಂದ ಸಂಜೆ 6 ವರೆಗೆ. ಮಳೆಗಾಲ ( ಜೂನ್ – ಅಕ್ಟೋಬರ್) ಒಳ್ಳೆಯ ಸಮಯ. ಜಲಪಾತದಲ್ಲಿ ನೀರು ಚೆನ್ನಾಗಿ ದುಮ್ಮಿಕ್ಕುವುದನ್ನು ನೋಡಬಹುದು.
ಹೊನ್ನಾವರಕ್ಕೆ ಬರಲು ನೀವು ಈ ಕೆಳಗಿನ ವಿಕಲ್ಪಗಳನ್ನು ಬಳಸಬಹುದು.
ವಾಯು ಮಾರ್ಗ: ಹೊನ್ನಾವರದ ಆಸು ಪಾಸು ಯಾವುದೇ ವಿಮಾನ ನಿಲ್ದಾಣ ಇಲ್ಲದೆ ಹೋದರು, ನೀವು ಹತ್ತಿರದ ವಿಮಾನ ನಿಲ್ದಾಣ ಮಂಗಳೂರು (IXE, 180 ಕಿ.ಮೀ) ಅಥವಾ ಹುಬ್ಬಳ್ಳಿಗೆ (HBX, 190 ಕಿ.ಮೀ) ಬಂದು, ಅಲ್ಲಿಂದ ಕ್ಯಾಬ್ ಅಥವಾ ಬಸ್ಸಿನ ಮೂಲಕ ಹೊನ್ನಾವರಕ್ಕೆ ಬರಬಹುದು.
ರೈಲು ಮಾರ್ಗ: ಹೊನ್ನಾವರದ ಕರ್ಕಿಯಲ್ಲಿ ರೈಲು ನಿಲ್ದಾಣವಿದ್ದು, ಕೊಂಕಣ ರೈಲ್ವೆಯ ಬಹಳಷ್ಟು ರೈಲುಗಳು ಹೊನ್ನಾವರಕ್ಕೆ ಬರುತ್ತವೆ. ರೈಲು ನಿಲ್ದಾಣದಿಂದ ಕೇವಲ 20 ಕಿ.ಮೀ ದೂರದಲ್ಲಿ ಜಲಪಾತವಿದೆ.
ರಸ್ತೆ ಮಾರ್ಗ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಬಹಳಷ್ಟು ಬಸ್ಸುಗಳು ಹೊನ್ನಾವರಕ್ಕೆ ಸಂಪರ್ಕವನ್ನು ಕಲ್ಪಿಸುತ್ತವೆ. ಅದೂ ಅಲ್ಲದೆ ಬಹಳಷ್ಟು ಖಾಸಗಿ ಬಸ್ಸುಗಳು 5 ನಿಮಿಷಕ್ಕೊಂದರಂತೆ ಇವೆ. ರಾಷ್ಟ್ರೀಯ ಹೆದ್ದಾರಿ 66 ಚತುಷ್ಪಥ ಹೆದ್ದಾರಿಯಾಗಿರುವುದರಿಂದ ಖಾಸಗಿ ವಾಹನದ ಮೂಲಕ ಬರುವುದು ಕೂಡ ಉತ್ತಮ ವಿಕಲ್ಪ.
ಅಪ್ಸರೆಯರು ಜಲಕ್ರೀಡೆ ಆಡುತ್ತಿದ್ದ 50 ಅಡಿ ಜಲಪಾತ:
ಅಪ್ಸರಕೊಂಡದ ಪ್ರಮುಖ ಆಕರ್ಷಣೆಯೆಂದರೆ ನೈಸರ್ಗಿಕ ಜಲಪಾತ, ಇದು ಹಚ್ಚ ಹಸಿರಿನ ಕಾಡಿನ ಮೂಲಕ ಹರಿಯುವ ಸಣ್ಣ ತೊರೆಯಿಂದ ರೂಪುಗೊಂಡಿದೆ. ಬಹಳ ಹಿಂದೆ ಇಲ್ಲಿ ಅಪ್ಸರೆಯರು ಬಂದು ಜಲ ಕ್ರೀಡೆಯನ್ನು ಮಾಡುತ್ತಿದ್ದರು ಎಂಬ ಪ್ರತಿತಿಯಿದೆ. ಅದಕ್ಕಾಗಿಯೇ ಈ ಸ್ಥಳಕ್ಕೆ “ಅಪ್ಸರ ಕೊಂಡ” ಎಂದು ಹೇಳುತ್ತಾರೆ. ಸುತ್ತಲು ಕಾಡು ಕಾಡಿನ ಮಧ್ಯೆ ಸುಮಾರು 50 ಅಡಿ ಎತ್ತರದಿಂದ ಬೀಳುವ ಜಲಪಾತ ಇದಾಗಿದೆ.
ಮಳೆಗಾಲದ ಅವಧಿಯಿಂದ ಮಾರ್ಚ್ ತಿಂಗಳ ತನಕ ಜಲಪಾತದಿಂದ ನೀರು ಬೀಳುತ್ತಲೇ ಇರುತ್ತದೆ. ಯಾವುದೇ ರೀತಿಯ ಅಪಾಯಕಾರಿಯಲ್ಲದ ಚಿಕ್ಕದಾದ ಹೊಂಡ ಇದಾಗಿದ್ದು ಕುಟುಂಬ ಸಮೇತ, ಸ್ನೇಹಿತರ ಜೊತೆಯಲ್ಲಿ ಕಾಲ ಕಳೆಯಲು ತುಂಬಾ ಉತ್ತಮವಾದ ಪ್ರವಾಸಿ ತಾಣವಾಗಿದೆ.
ವಿಶ್ರಾಂತಿ ಪಡೆಯಲು ಸುಂದರ ಮರೈನ್ ಪಾರ್ಕ್:
ಈ ಅಪ್ಸರಕೊಂಡದಲ್ಲಿ ಕಾಲವನ್ನು ಕಳೆದು ಹಾಗೆಯೇ ಮೆಟ್ಟಿಲುಗಳನ್ನು ಏರಿ ಮುಂದೆ ಬಂದರೆ ದಾರಿಯುವುದಕ್ಕೂ ಹೂವಿನ ಗಿಡಗಳು, ಹಣ್ಣು ಮತ್ತು ಔಷಧಿಯ ಮರಗಳನ್ನು ನೋಡಬಹುದು. ಹಸಿರಿನಿಂದ ತುಂಬಿದ ಕಾಡಿನ ಮಧ್ಯೆ ಹಕ್ಕಿಗಳ ಚಿಲಿಪಿಲಿಯನ್ನು ಕೇಳುತ್ತಾ ಮುಂದೆ ಸಾಗಿದರೆ ಕಾಣಸಿಗುವುದೇ ದೊಡ್ಡದಾದ ಕೆಂಪು ಅಕ್ಷರದಲ್ಲಿ ಬರೆದಿರುವ ಮರೈನ್ ಪಾರ್ಕ್. ಇಲ್ಲಿ ವಿಶ್ರಾಂತಿ ಪಡೆದುಕೊಳ್ಳಲು ಒಂದು ತಂಗುದಾಣ ವನ್ನು ನಿರ್ಮಿಸಲಾಗಿದ್ದು ಆಸನದ ವ್ಯವಸ್ಥೆಯೂ ಕೂಡ ಇದೆ. ಇಲ್ಲಿ ವೀವ್ ಪಾಯಿಂಟ್ ಇದ್ದು ಇಲ್ಲಿಂದ ಅರಬ್ಭಿ ಸಮುದ್ರ ಹಾಗೂ ಬೀಚ್ ನ್ನು ನೋಡಬಹುದಾಗಿದೆ. ವೀವ್ ಪಾಯಿಂಟ್ ಇಂದ ಸಮುದ್ರದ ನೋಟ ತುಂಬಾನೇ ರಮಣೀಯವಾಗಿದೆ.
ಇಲ್ಲಿಂದ ಮುಂದೆ ಸಾಗಿದರೆ ಉದ್ಯಾನವನವನ್ನು ಇನ್ನಷ್ಟು ಚೆಂದಗಾಣಿಸಲು ಅಲ್ಲಲ್ಲಿ ಪ್ರಾಣಿಗಳ ಹಾಗೂ ಜಲಚರಗಳ ಜೀವ ಗಾತ್ರದ ಪ್ರತಿಮೆಗಳನ್ನು ಸ್ಥಾಪಿಸಿದ್ದಾರೆ. ದೂರದಿಂದ ನಿಂತು ನೋಡಿದಾಗ ನಿಜವಾದ ಪ್ರಾಣಿ ನಿಂತಿದೆಯೋ ಏನೋ ಎನ್ನುವಂತೆ ಭಾಸವಾಗುತ್ತದೆ. ಮಕ್ಕಳನ್ನು ಕರೆದುಕೊಂಡು ಬಂದರೆ ಅವರಿಗೆ ಆಟದ ಜೊತೆಗೆ ಜೀವಸಂಕುಲಗಳ ಪರಿಚಯದ ಪಾಠವನ್ನು ಕೂಡ ಮಾಡಬಹುದು. ಈ ಉದ್ಯಾನವನವನ್ನು ಹೊನ್ನಾವರ ಪ್ರದೇಶದ ಅರಣ್ಯ ಇಲಾಖೆ ನಿರ್ವಹಿಸುತ್ತದೆ.
ಅಪ್ಸರಾ ಕೊಂಡ ಬೀಚ್
ಮರೈನ್ ಪಾರ್ಕ್ ಇಂದ ಮೆಟ್ಟಿಲುಗಳನ್ನು ಇಳಿದುಕೊಂಡು ಬಂದರೆ ಅಪ್ಸರಕೊಂಡ ಬೀಚ್ ಸಿಗುತ್ತದೆ. ತುಂಬಾ ಸುಂದರವಾದ ಯಾವುದೇ ಕಲ್ಮಶಗಳಿಲ್ಲದ ಹೊನ್ನಾವರದ ಅಪ್ಸರ ಕೊಂಡ ಬೀಚ್ ಇದಾಗಿದೆ. ಸಂಜೆ ಸೂರ್ಯಾಸ್ತವನ್ನು ಈ ಬೀಚಿಂದ ನೋಡುವುದು ಮನಸ್ಸಿಗೂ ಮತ್ತು ಕಣ್ಣಿಗೂ ತುಂಬಾ ಮುದವನ್ನು ನೀಡುತ್ತದೆ. ಯಾವತ್ತೂ ಪ್ರವಾಸಿಗರಿಂದ ತುಂಬಿರುವ ಈ ಬೀಚಲ್ಲಿ ಫೋಟೋಶೂಟ್ ಗಳನ್ನು ಮಾಡಲು ಜನರು ಬರುತ್ತಿರುತ್ತಾರೆ. ಬೀಚ್ ಪಕ್ಕದಲ್ಲಿ ಕೂಡ ಒಂದು ಪಾರ್ಕ್ ಇದ್ದು ಪಾರ್ಕಿನ ಒಳಗೆ ಕುಳಿತುಕೊಳ್ಳುವ ಆಸನಗಳು ಹಾಗೂ ಉಯ್ಯಾಲೆ ಜಾರುಬಂಡಿ ಗಳು ಇವೆ.
ಅಪ್ಸರಕೊಂಡವು ಶಿವನ ದೇವಾಲಯಕ್ಕೆ ಹೆಸರುವಾಸಿಯಾಗಿದೆ, ಇದು 400 ವರ್ಷಗಳಷ್ಟು ಹಳೆಯದು ಎಂದು ನಂಬಲಾಗಿದೆ. ಈ ದೇವಾಲಯವು ಬೆಟ್ಟದ ಮೇಲಿದ್ದು ಸುತ್ತಮುತ್ತಲಿನ ಪ್ರದೇಶಗಳ ವಿಹಂಗಮ ನೋಟವನ್ನು ನೀಡುತ್ತದೆ.
ಒಟ್ಟಾರೆಯಾಗಿ, ಅಪ್ಸರಕೊಂಡವು ಪ್ರಕೃತಿ ಪ್ರಿಯರಿಗೆ, ಸಾಹಸ ಉತ್ಸಾಹಿಗಳಿಗೆ ಮತ್ತು ಭಾರತದ ಆಫ್‌ಬೀಟ್ ಪ್ರವಾಸಿ ತಾಣಗಳ ಸೌಂದರ್ಯವನ್ನು ಅನ್ವೇಷಿಸಲು ಬಯಸುವವರಿಗೆ ಪರಿಪೂರ್ಣ ತಾಣವಾಗಿದೆ. ನಾವು ಅಪ್ಸರಕೊಂಡಕ್ಕೆ ಹೋದ ಕ್ಷಣವನ್ನು ನಿಜವಾಗಿಯೂ ಆನಂದಿಸಿದ್ದೇವೆ ಮತ್ತು ಬಹಳ ಸುಂದರವಾದ ಸಂಜೆಯನ್ನು ಕಳೆದಿದ್ದೇವೆ. ಈ ಪ್ರವಾಸಿ ತಾಣವು ಒಂದು ದಿನದ ಪ್ರವಾಸಕ್ಕೆ ಉತ್ತಮವಾಗಿದೆ.
ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ:
ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳು
Leave a Reply