ಕೊಡಿ ಹಬ್ಬ ಅಥವಾ ಕೋಟೇಶ್ವರ ಜಾತ್ರೆ ಕರಾವಳಿ ಕರ್ನಾಟಕದ ಅತಿ ದೊಡ್ಡ ಜಾತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರದ ಕೋಟಿಲಿಂಗೇಶ್ವರ ದೇವಸ್ಥಾನ ಬಹಳ ಪ್ರಸಿದ್ಧಿ ಪಡೆದಿರುವ ದೇವಸ್ಥಾನ. ಇಲ್ಲಿ ಪ್ರತಿ ವರ್ಷ ಕೊಡಿ ತಿಂಗಳಲ್ಲಿ (ನವೆಂಬರ್ ಅಥವಾ ಡಿಸೆಂಬರ್) ತುಂಬಾ ಅದ್ದೂರಿಯಾದ ಜಾತ್ರೆ ನಡೆಯುತ್ತದೆ. ಉಡುಪಿ ಜಿಲ್ಲೆ ಮಾತ್ರವಲ್ಲದೆ ದೂರದ ಊರುಗಳಿಂದ ಲಕ್ಷಾಂತರ ಜನ ಇಲ್ಲಿ ಬಂದು ಜಾತ್ರೆಯನ್ನು ಸಂಭ್ರಮಿಸುತ್ತಾರೆ.
ಸ್ಥಳ: ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನ, ಕೋಟೇಶ್ವರ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ
ಪರಿವಿಡಿ:
ಕೊಡಿ ಹಬ್ಬ ಎಂದು ಹೆಸರು ಬರಲು ಕಾರಣ:
ಕೊಡಿ ಎಂದರೆ ಕಬ್ಬು. ಬಹಳ ಹಿಂದೆ ಬಸ್ರೂರಿನಲ್ಲಿ ವಸು ಚಕ್ರವರ್ತಿ ಎಂಬ ರಾಜ ಆಳುತ್ತಿದ್ದನು. ಆತನಿಗೆ ಮದುವೆಯಾಗಿ ತುಂಬಾ ಸಮಯದ ತನಕ ಸಂತಾನ ಲಭಿಸಲಿಲ್ಲ. ಹಾಗಾಗಿ ಮಕ್ಕಳಾದರೆ ಕೋಟಿಲಿಂಗೇಶ್ವರ ದೇವಸ್ಥಾನ ಕಟ್ಟುವುದಾಗಿ ಸಂಕಲ್ಪ ಮಾಡುತ್ತಾರೆ. ಮುಂದೆ ಸಂತಾನ ಪ್ರಾಪ್ತಿಯಾದ ಮೇಲೆ ಕೊಟ್ಟ ಮಾತಿನಂತೆ ದೇವಸ್ಥಾನವನ್ನು ಕಟ್ಟುತ್ತಾರೆ.
ಆದರೆ ಜಾತ್ರೆಯ ಸಮಯದಲ್ಲಿ ಬ್ರಹ್ಮರಥವು ಪೂರ್ಣಗೊಳ್ಳದ ಕಾರಣ ಬಿದಿರು ಹಾಗು ಕಬ್ಬಿನಿಂದ ರಥವನ್ನು ಮಾಡಿ ಹಬ್ಬವನ್ನು ಆಚರಿಸುತ್ತಾರೆ. ಮುಂದೆ ಇದೇ ಇಲ್ಲಿನ ಪ್ರತೀತಿಯಾಗಿ ಆಚರಣೆಗೆ ಬಂದಿದೆ. ಕೊಡಿ ಹಬ್ಬದಲ್ಲಿ ನವ ದಂಪತಿಗಳು ಜೋಡಿ ಕಬ್ಬನ್ನ ತೆಗೆದುಕೊಂಡು ಪುಷ್ಕರಣಿಯಲ್ಲಿ ಸ್ನಾನ ಮಾಡಿ ದೇವರಿಗೆ ಪೂಜೆ ಮಾಡಿ ಮನೆಗೆ ತೆಗೆದುಕೊಂಡು ಹೋದರೆ ಅವರಿಗೆ ಸಂತಾನ ಪ್ರಾಪ್ತಿಯಾಗುತ್ತೆ ಅಂತ ಇಲ್ಲಿನ ಸಂಪ್ರದಾಯ.
ಅಂದಿನಿಂದ ಪ್ರತಿ ವರ್ಷ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಜಾತ್ರೆ ನಡೆಯುತ್ತದೆ. ಇದನ್ನು ಸಾಮಾನ್ಯವಾಗಿ ಕೊಡಿ ತಿಂಗಳು ಎಂದು ಕರೆಯಲಾಗುತ್ತದೆ. ಹಬ್ಬವನ್ನು ಆಚರಿಸಲು ಬೇರೆ ಬೇರೆ ಊರಿನಿಂದ ಲಕ್ಷಾಂತರ ಜನರು ಸೇರುತ್ತಾರೆ. ಉತ್ಸವದ ದಿನ, ಬ್ರಹ್ಮರಥವನ್ನು ಕೋಟೇಶ್ವರದ ಸುತ್ತಲೂ ಎಳೆಯಲಾಗುತ್ತದೆ ಮತ್ತು ಅನೇಕ ಭಕ್ತರು ಇದಕ್ಕೆ ಸಾಕ್ಷಿಯಾಗುತ್ತಾರೆ.
ಹಬ್ಬದ ವಿಶೇಷ ಸಂತೆ:
ಕೋಟೇಶ್ವರ ಹಬ್ಬದ ಸಂತೆ ಅಂದರೆ ಪ್ರತಿಯೊಬ್ಬರಿಗೂ ಅಚ್ಚುಮೆಚ್ಚು. ಇಡೀ ಕೊಟೇಶ್ವರದ ರಸ್ತೆಯ ಇಕ್ಕೆಲಗಳಲ್ಲಿ ಸಾಲು ಸಾಲಾಗಿ ಸಂತೆ ಇರುತ್ತದೆ. ಹಬ್ಬ ಒಂದೇ ದಿನ ಇದ್ದರೂ ಕೂಡ, ಸಂತೆ ಮಾತ್ರ ಕನಿಷ್ಠ ಪಕ್ಷ ಏಳು ದಿನಗಳವರೆಗೆ ನಡೆಯುತ್ತದೆ. ಬೆಳಗ್ಗೆ ಸಂತೆ ಶುರುವಾದರೆ ಮಧ್ಯರಾತ್ರಿ 12 ಗಂಟೆಯಾದರೂ ಜನರು ಕಂಡುಬರುವುದು ಸರ್ವೇಸಾಮಾನ್ಯ.
ನೀವು ಆಹಾರಪ್ರಿಯರಾಗಿದ್ದರೆ, ಎಲ್ಲಾ ರೀತಿಯ ಬೀದಿ ಆಹಾರಗಳು, ಚಾಟ್‌ಗಳು, ಸಿಹಿತಿಂಡಿಗಳು ಮತ್ತು ಇನ್ನೂ ಹೆಚ್ಚಿನದನ್ನು ಕಾಣಬಹುದು. ತಾಜಾ ಜಿಲೇಬಿ ಮತ್ತು ತಾಜಾ ಕಬ್ಬಿನ ರಸವನ್ನು ತಯಾರಿಸುವ ಅಂಗಡಿಗಳು ಪ್ರಮುಖ ಆಕರ್ಷಣೆಗಳಾಗಿವೆ. ಅಷ್ಟೇ ಅಲ್ಲ ವಿವಿಧ ಬಗೆಯ ಐಸ್ ಕ್ರೀಮ್ ಗಳು, ತಾಜಾ ಹಣ್ಣಿನ ಜ್ಯೂಸ್ ಗಳು, ರುಮಾಲಿ ರೋಟಿ, ಗೋಬಿ ಮಂಚೂರಿಯನ್ ಇತ್ಯಾದಿ ಲೈವ್ ಕೌಂಟರ್ ಗಳು ಎಲ್ಲೆಂದರಲ್ಲಿ ಕಂಡುಬರುತ್ತವೆ.
ಇನ್ನು ಹೆಣ್ಣು ಮಕ್ಕಳಿಗಂತೂ ಸಂತೆ ಸುತ್ತುವುದೆಂದರೆ ಎಲ್ಲಿಲ್ಲದ ಸಂತಸ. ಏಕೆಂದರೆ ಅವರಿಗೆ ಇಷ್ಟವಾದ ಕೈ ಬಳೆಗಳು, ವಿವಿಧ ರೀತಿಯ ಆಭರಣಗಳು, ಬಣ್ಣ ಬಣ್ಣದ ವ್ಯಾನಿಟಿ ಬ್ಯಾಗ್ ಗಳು ಹಾಗೂ ಬಟ್ಟೆಗಳು ಸಂತೆಯಲ್ಲಿ ತುಂಬಾ ಕಡಿಮೆ ದರದಲ್ಲಿ ಸಿಗುತ್ತವೆ. ಅದರಲ್ಲೂ ಅಂಗಡಿಯವರ ಜೊತೆಗೆ ಚರ್ಚೆ ಮಾಡಿ ವಸ್ತುಗಳನ್ನು ಖರೀದಿಸುವುದು ಏನೋ ಒಂದು ಖುಷಿ.
ಹಬ್ಬವು ಮಕ್ಕಳಿಗಂತೂ ನೆಚ್ಚಿನ ತಾಣ. ಅವರು ವಿವಿಧ ರೀತಿಯ ಆಟಿಕೆಗಳು ಮತ್ತು ವರ್ಣರಂಜಿತ ಬಲೂನ್ಗಳನ್ನು ಖರೀದಿಸಲು ಮುಗಿ ಬೀಳುತ್ತಾರೆ. ಉತ್ಸವದಲ್ಲಿ ತಾತ್ಕಾಲಿಕ ಅಮ್ಯೂಸ್ಮೆಂಟ್ ಪಾರ್ಕ್ ಅನ್ನು ಸಹ ಸ್ಥಾಪಿಸಲಾಗುತ್ತದೆ. ಗೈನ್ಟ್ ವೀಲ್, ಬ್ರೇಕ್ ಡ್ಯಾನ್ಸ್, ಕೊಲಂಬಸ್, ಮೆರ್ರಿ ಗೋ ರೌಂಡ್ ಇವೆಲ್ಲ ಮಕ್ಕಳಿಗೆ ಅಚ್ಚು ಮೆಚ್ಚು.
ಒಟ್ಟಿನಲ್ಲಿ ಹೇಳುವುದಾದರೆ ಕೋಟೇಶ್ವರ ಹಬ್ಬವು ಕುಂದಾಪುರ ತಾಲೂಕಿನ ಮತ್ತು ಸುತ್ತಮುತ್ತಲಿನ ಅನೇಕ ಜನರನ್ನು ಒಂದುಗೂಡಿಸುವ ಹಬ್ಬವಾಗಿದೆ. ನೀವು ಈ ಹಬ್ಬಕ್ಕೆ ಬಂದಿದ್ದರೆ ನಿಮ್ಮ ಅನುಭವವನ್ನೂ ನಮಗೆ ತಿಳಿಸಿ. ಈ ಹಬ್ಬದಲ್ಲಿ “ತೇರ್ ಅಡಿ ಸಿಗ್ವಾ” ಎಂದರೆ ರಥದ ಬಳಿ ಭೇಟಿಯಾಗೋಣ ಎಂಬ ಸಾಮಾನ್ಯ ಮಾತು ಇದೆ. ಹಾಗಾಗಿ ಮುಂದಿನ ಕೊಡಿ ಹಬ್ಬಕ್ಕೆ “ತೇರ್ ಅಡಿ ಸಿಗ್ವಾ”.
Leave a Reply