ಗುಳಿ ಗುಳಿ ಶಂಕರ ದೇವಸ್ಥಾನ ಅಥವಾ ಗುಳಿ ಗುಳಿ ಶಂಕರೇಶ್ವರ ದೇವಸ್ಥಾನವು ಹೊಸನಗರ ತಾಲೂಕಿನ ಗುಬ್ಬಿಗ ಅನ್ನುವ ಊರಿನ ವ್ಯಾಪ್ತಿಯಲ್ಲಿ ಬರುತ್ತದೆ. ಗುಳಿ ಗುಳಿ ಶಂಕರೇಶ್ವರ ದೇವಸ್ಥಾನದಲ್ಲಿ ಪ್ರಸಿದ್ಧವಾದ ಜಟಾ ತೀರ್ಥ ಎಂಬ ಕೊಳವಿದೆ. ಈ ಕೊಳದಲ್ಲಿ ವರ್ಷದ 365 ದಿನವೂ ನೀರು ಬತ್ತೋದೇ ಇಲ್ಲ. ಈ ಸ್ಥಳದ ಬಹಳಷ್ಟು ವಿಶೇಷ ಮಾಹಿತಿ ಈ ಲೇಖನದಲ್ಲಿ ಓದಿರಿ.
ಸ್ಥಳ: ಶ್ರೀ ಗುಳಿ ಗುಳಿ ಶಂಕರೇಶ್ವರ ದೇವಸ್ಥಾನ, ಗುಬ್ಬಿಗ, ಹೊಸನಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ.
ವರ್ಷದ ಎಲ್ಲಾ 365 ದಿನಗಳು ತೆರೆದಿರುತ್ತವೆ.
ಪರಿವಿಡಿ:
ದೇವಸ್ಥಾನವನ್ನು ತಲುಪುವುದು ಹೇಗೆ?
ವಿಮಾನದ ಮೂಲಕ: ಹತ್ತಿರದ ವಿಮಾನ ನಿಲ್ದಾಣವು ಮಂಗಳೂರು (IXE) ಸುಮಾರು 166 ಕಿಮೀ ದೂರದಲ್ಲಿದೆ. ಪ್ರಯಾಣಿಕರು ಟ್ಯಾಕ್ಸಿಯನ್ನು ಬಾಡಿಗೆಗೆ ಪಡೆಯಬಹುದು ಅಥವಾ ಬಸ್ ಮೂಲಕ ಪ್ರಯಾಣಿಸಬಹುದು.
ರೈಲಿನ ಮೂಲಕ: ಹತ್ತಿರದ ರೈಲು ನಿಲ್ದಾಣವು ಶಿವಮೊಗ್ಗ ರೈಲು ನಿಲ್ದಾಣವಾಗಿದೆ (SME) ಇದು ದೇವಸ್ಥಾನದಿಂದ ಸುಮಾರು 38 ಕಿಮೀ ದೂರದಲ್ಲಿದೆ.
ರಸ್ತೆ ಮೂಲಕ: ಶಿವಮೊಗ್ಗದಿಂದ ದೇವಸ್ಥಾನಕ್ಕೆ ಬಸ್ಸುಗಳು ಬಹಳ ಅಪರೂಪ. ಖಾಸಗಿ ವಾಹನಗಳು ಅಥವಾ ಟ್ಯಾಕ್ಸಿ ಮೂಲಕ ಪ್ರಯಾಣಿಸುವುದು ಉತ್ತಮ.
ನಾವು ಹೋಗಿದ್ದು ಹೇಗೆ? ರಿಪ್ಪನ್ ಪೇಟೆಯಲ್ಲಿರುವ ಸ್ನೇಹಿತರೊಬ್ಬರ ಮನೆಯಲ್ಲಿ ಉಳಿದುಕೊಂಡು ಖಾಸಗಿ ವಾಹನದಲ್ಲಿ ಸುಮಾರು ಅರ್ಧ ಗಂಟೆ ಪ್ರಯಾಣಿಸಿದೆವು.
ಗುಳಿ ಗುಳಿ ಶಂಕರ ದೇವಸ್ಥಾನದ ಇತಿಹಾಸ:
ತ್ರೇತಾಯುಗದ ಮೊದಲು ಈ ಪ್ರದೇಶಕ್ಕೆ ವನವಿಹಾರಕ್ಕೆಂದು ಶಿವ ಪಾರ್ವತಿಯರು ಬರುತ್ತಾರೆ. ಆಗ ಪಾರ್ವತಿಗೆ ಬಾಯಾರಿಕೆ ಆಗಿ ಶಿವನ ಹತ್ತಿರ ನೀರು ಬೇಕು ಎಂದು ಕೇಳಿದಾಗ ಶಿವನು ಗಂಗೆಯನ್ನು ಆಹ್ವಾನಿಸುತ್ತಾನೆ. ಆಗ ಗಂಗೆಯು ಚಿಲುಮೆಯಂತೆ ಶಿವನ ಜಟೆ ಗಿಂತಲೂ ಮೇಲಕ್ಕೆ ಚಿಮ್ಮುತ್ತಾಳೆ. ಇದರಿಂದ ಸಂತೋಷಗೊಂಡ ಶಿವನು ಗಂಗೆಯನ್ನು, ನಿನ್ನ ಔಷಧೀಯ ಗುಣಗಳನ್ನು ಹೊಂದಿರುವ ಈ ನೀರಿನಿಂದ ಜನರಿಗೆ ಒಳ್ಳೆಯದಾಗಲಿ, ನೀನು ಇಲ್ಲಿಯೇ ನೆಲೆಸು ಎಂದು ಹೇಳುತ್ತಾನೆ. ಅದಕ್ಕೆ ಗಂಗೆಯು ಒಪ್ಪದಿದ್ದಾಗ, ಕೋಪಗೊಂಡ ಶಿವನು ತನ್ನ ಜಟೆಯಲ್ಲಿ ಗಂಗೆಯನ್ನು ಬಂಧಿಸುತ್ತಾನೆ. ನಂತರ ಗಂಗೆಯು ಶಿವನ ಹತ್ತಿರ, ನೀವು ಇಲ್ಲಿ ಐಕ್ಯವಾಗುವುದಾದರೆ ನಾನು ಇಲ್ಲಿಯೇ ನೆಲೆಸುತ್ತೇನೆ ಎಂದು ಹೇಳುತ್ತಾಳೆ. ಇದಕ್ಕೆ ಒಪ್ಪಿದ ಶಿವನು ಇಲ್ಲಿಯೇ ಗಂಗೆಯ ಸಮೇತ ನೆಲೆಸಿದ್ದಾನೆ ಎಂಬ ಇತಿಹಾಸ ಇದೆ.
ಗುಳಿ ಗುಳಿ ಶಂಕರ ಏಕೆ ವಿಶೇಷ?
ನಾವು ಈ ದೇವಸ್ಥಾನಕ್ಕೆ ಬೆಳಿಗ್ಗೆ ತಲುಪಿ ಅಲ್ಲಿ ದೇವರ ದರ್ಶನ ಪಡೆದು ಅಲ್ಲಿನ ಕಾರ್ಯಾಲಯದಲ್ಲಿ 20rs ಗೆ ಕೊಡುವ ಬಿಲ್ವಪತ್ರೆ ಯನ್ನು ತೆಗೆದುಕೊಂಡು ಭಕ್ತಿಯಿಂದ ಬೇಡಿಕೊಂಡು ದೇವಸ್ಥಾನದ ಹತ್ತಿರವೇ ತೋಟದ ಮಧ್ಯೆ ಇರುವ ಜಟಾ ತೀರ್ಥದ ಹತ್ತಿರ ಬಂದೆವು. ಇಲ್ಲಿನ ಇನ್ನೊಂದು ವಿಸ್ಮಯ ಎಂದರೆ ಸುತ್ತಲೂ ಎಲ್ಲಿಯೂ ನೀರಿನ ಮೂಲವಿಲ್ಲದಿದ್ದರೂ ಈ ಕೊಳದಲ್ಲಿ ವರ್ಷದ 365 ದಿನವೂ ನೀರು ಚಿಮ್ಮುತ್ತಲೇ ಇರುತ್ತದೆ. ನಂತರ
ಜಟಾತೀರ್ಥದ ಹತ್ತಿರ ಹೋಗಿ ಅಲ್ಲಿ ಮೊದಲು ಕಳಸದಲ್ಲಿ ನೀರನ್ನು ತುಂಬಿಸಿ ಅದರಿಂದ ಅಲ್ಲಿಯೇ ಬಳಿ ಇರುವ ಲಿಂಗಕ್ಕೆ ಅಭಿಶೇಕ ವನ್ನು ಮಾಡಿದೆವು.
ನಂತರ ನಾವು ಹಾಗೆಯೇ ಕೊಳದ ಹತ್ತಿರ ಬಂದು ಮನದ ಇಷ್ಟಾರ್ಥವನ್ನು ಬೇಡಿಕೊಂಡು 3 ಸಲ ಬಿಲ್ವಪತ್ರೆಯನ್ನು ಕೊಳದಲ್ಲಿ ಮುಳುಗಿಸಿ ಹಾಗೆಯೇ ಕೊಳದಲ್ಲಿ ತೇಲಿಸಿ ಬಿಟ್ಟೆವು. ಬಿಲ್ವಪತ್ರೆ ಯು ನಿಧಾನವಾಗಿ ಕೊಳದಲ್ಲಿ ನೇರವಾಗಿ ನಿಂತ ಪಾಚಿಗಳ ಮಧ್ಯದಿಂದ ನುಸುಳಿ ಕೊಳದ ತಳದಲ್ಲಿ ಹೋಗಿ ತಲುಪಿತು. ಇಲ್ಲಿನ ಇನ್ನೊಂದು ನಂಬಿಕೆ ಏನೆಂದರೆ ಬಿಲ್ವಪತ್ರೆಯು ಮೇಲಕ್ಕೆ ಬಂದರೆ ನಾವು ಬೇಡಿಕೊಂಡ ಕೆಲಸವು ಆಗುತ್ತದೆ ಎಂದು ಅರ್ಥ. ಇಲ್ಲಿ ಕೆಲವರಿಗೆ ಬಿಲ್ವಪತ್ರೆಯು ಬೇಗ ತೇಲಿ ಬಂದು ಸಿಗುತ್ತದೆ. ಹಾಗೆಯೇ ಇನ್ನೂ ಕೆಲವರಿಗೆ ಬಿಲ್ವಪತ್ರೆಯು ಅರ್ಧ ದಿನವಾದರೂ ಸಿಗುವುದಿಲ್ಲ. ಇದರ ಅರ್ಥ ಅಂದುಕೊಂಡ ಕೆಲಸವು ನೆರವೇರುವುದಿಲ್ಲ ಎಂದು. ಆದರೆ ಸುಮಾರು 5-6 ನಿಮಿಷದ ನಡುವೆ ನಾವು ಹಾಕಿದ ಬಿಲ್ವಪತ್ರೆ ಯು ನಿಧಾನವಾಗಿ ಮೇಲಕ್ಕೆ ಬಂತು. ಈ ಸಮಯದಲ್ಲಿ ನಮ್ಮ ಆನಂದಕ್ಕೆ ಕಣ್ಣೀರು ಬಂದದ್ದು ಮಾತ್ರ ನಿಜ.
ಈ ಕೊಳದಲ್ಲಿ ಮೇಲ್ಗಡೆ ತೇಲುವ ಪಾಚಿ ಯನ್ನು ಶಿವನ ಜಟೆ ಎಂದು ಕರೆಯುತ್ತಾರೆ. ಹಾಗೆಯೇ ಈ ತೀರ್ಥವನ್ನು ಕುಡಿದರೆ ಹಾಗೂ ಅದರಿಂದ ಸ್ನಾನವನ್ನು ಮಾಡಿದರೆ ರೋಗರುಜಿನವೂ ಕಡಿಮೆ ಆಗುತ್ತದೆ ಎಂಬ ಪ್ರತಿತಿಯಿದೆ. ಇಲ್ಲಿ ಮುಂಜಾನೆ ಸೂರ್ಯನ ಕಿರಣಗಳು ಈ ಕೊಳವನ್ನು ಸ್ಪರ್ಶಿಸಿದಾಗ ಬಂಗಾರದ ಬಣ್ಣದಲ್ಲಿ ಈ ಕೊಳವು ಹೊಳೆಯುತ್ತದೆ. ನಾವು ಒಂದು ಬಾಟಲಿಯಲ್ಲಿ ತೀರ್ಥವನ್ನು ತೆಗೆದುಕೊಂಡು ಬಂದೆವು.
ನೀವು ಶಿವಮೊಗ್ಗದ ಕಡೆಗೆ ಪ್ರಯಾಣಿಸುತ್ತೀರಾ ಎಂದರೆ ಖಂಡಿತವಾಗಿಯೂ ಈ ಸ್ಥಳಕ್ಕೆ ಒಮ್ಮೆ ಭೇಟಿ ನೀಡಿ.
ಇದನ್ನೂ ಒಮ್ಮೆ ಓದಿ: ತುಳುವೇಶ್ವರ ದೇವಸ್ಥಾನ
ಈ ಲೇಖನವನ್ನು ಇಂಗ್ಲಿಷ್ ನಲ್ಲಿ ಓದಲು [ಇಲ್ಲಿ ಒತ್ತಿ]
ಗುಳಿ ಗುಳಿ ಶಂಕರ ದೇವಸ್ಥಾನದ ವಿಡಿಯೋ:
Leave a Reply