ತುಳುವೇಶ್ವರ ದೇವಸ್ಥಾನ – ಬಸ್ರೂರು

ತುಳುವೇಶ್ವರ

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಸ್ರೂರು ಎಂಬ ಊರು ಕುಂದಾಪುರದಿಂದ 9km ದೂರದಲ್ಲಿದೆ. ಈ ಪ್ರದೇಶವನ್ನು ಮೊದಲು ವಸು ಚಕ್ರವರ್ತಿ ಆಳಿದ್ದರಿಂದ ಈ ಊರಿಗೆ ಮೊದಲು ವಸುಪುರ ಎಂಬ ಹೆಸರಿತ್ತು. ಒಂದಾನೊಂದು ಕಾಲದಲ್ಲಿ ಈ ಊರು ಉಡುಪಿ ಜಿಲ್ಲೆಯ ಪ್ರಮುಖ ವ್ಯಾಪಾರ ಸ್ಥಳವೂ ಆಗಿತ್ತು. ರಾಜರ ಆಳ್ವಿಕೆಯ ಸಮಯದಲ್ಲಿ ಕಾಣುವ ಏಷ್ಟೋ ಅವಶೇಷಗಳಲ್ಲಿ ಈ ತುಳುವೇಶ್ವರ ದೇವಸ್ಥಾನವೂ ಒಂದು.

ತುಳುವೇಶ್ವರ ದೇವಸ್ಥಾನ ತಲುಪುವುದು ಹೇಗೆ?

Location: ತುಳುವೇಶ್ವರ ದೇವಸ್ಥಾನ, ಆನಗಳ್ಳಿ ರಸ್ತೆ , ಬಸ್ರೂರು

ವಾಯು ಮಾರ್ಗ: ಮಂಗಳೂರು ವಿಮಾನ ನಿಲ್ದಾಣ (IXE) ಇಲ್ಲಿಂದ ಸುಮಾರು 100 ಕಿಮೀ ದೂರದಲ್ಲಿದೆ. ವಿಮಾನ ನಿಲ್ದಾಣದಿದ ಟ್ಯಾಕ್ಸಿ ಅಥವಾ ಕುಂದಾಪುರಕ್ಕೆ ಬಸ್ ಮೂಲಕ ಬರಬಹುದು

ರೈಲು ಮಾರ್ಗ: ಕುಂದಾಪುರದ ರೈಲು ನಿಲ್ದಾಣ (KUDA) ಬಸ್ರುರಿಂದ ಕೇವಲ 4 ಕಿಮೀ ದೂರದಲ್ಲಿದೆ, ರೈಲು ನಿಲ್ದಾಣದಿಂದ ಆಟೋ ವ್ಯವಸ್ಥೆ ಇದೆ

ರಸ್ತೆ ಮಾರ್ಗ: ಬಸರೂರಿನಲ್ಲಿ ಬಸ್ ನಿಲ್ದಾಣವಿದ್ದು ಕುಂದಾಪುರದಿಂದ ಬಹಳಷ್ಟು ಬಸ್ ವ್ಯವಸ್ಥೆ ಇದೆ.

ತುಳುವೇಶ್ವರ ದೇವಸ್ಥಾನದ ಇತಿಹಾಸ :

ತುಳುವೇಶ್ವರ ದೇವಸ್ಥಾನ
ತುಳುವೇಶ್ವರ ದೇವಸ್ಥಾನದ 1000 ವರ್ಷ ಹಳೆಯ ಈಶ್ವರ ಲಿಂಗ

ತುಳುನಾಡಿನ ಮೂಲ ದೇವರು ಎಂದು ಕರೆಯಲ್ಪಡುವ ಈ ದೇವರು ತುಂಬಾ ಶಕ್ತಿಶಾಲಿ ಹಾಗೂ ಭಕ್ತರ ಬೇಡಿಕೆಗಳನ್ನು ಈಡೇರಿಸುವ ದೇವರು ಎಂದರೆ ತಪ್ಪಾಗಲಾರದು. ಈ ದೇವಾಲಯವು ಬಸ್ರೂರಿನ ಶಾಂತೆರಿ ಕಾಮಾಕ್ಷಿ ದೇವಸ್ಥಾನದ ಮುಂದೆ ಇದೆ. ಸುಮಾರು 1000 ವರ್ಷಗಳಷ್ಟು ಹಳೆಯದಾದ ಈ ದೇವಸ್ಥಾನಕ್ಕೆ ಯಾವುದೇ ಕಲ್ಲಿನಿಂದ ಮಾಡಿದ ಗೊಡೆ ಅಥವಾ ಯಾವುದೇ ರೀತಿಯ ಗರ್ಭಗುಡಿ ಇಲ್ಲ.

ತುಳುವೇಶ್ವರನಿಗೆ ಆಶ್ರಯ ಕೊಡುತ್ತಿರುವ ಆಲದ ಮರ

ಹಚ್ಚ ಹಸಿರಿನ ನಡುವೆ ಈ ತುಳುವೇಶ್ವರನಿಗೆ ಮಳೆ, ಗಾಳಿ, ಬಿಸಿಲು, ಹಾಗೂ 4ದಿಕ್ಕಿನಿಂದಲೂ ರಕ್ಷಣೆ ಕೊಡುತ್ತಿರುವುದು 250ವರ್ಷ ಹಳೆಯದಾದ ಆಲದ ಮರ. ಸುತ್ತಲೂ ಬೆಳೆದಿರುವ ಆಲದ ಮರದ ನಡುವೆ ಈ ದೇವರ ಗರ್ಭ ಗುಡಿ ಇದೆ. ಗರ್ಭ ಗುಡಿ ಪ್ರವೇಶಿಸಲು ಒಬ್ಬರೇ ಒಬ್ಬರು ಹೋಗುವಷ್ಟು ಮಾತ್ರ ಜಾಗವಿದೆ. ಅದರ ಮುಂದೆಯೇ ಕಲ್ಲಿಂದ ಕೆತ್ತಿದ ನಂದಿಯ ವಿಗ್ರಹವಿದೆ. ಸುತ್ತಲೂ ದೊಡ್ಡದಾಗಿ ಬೆಳೆದಿರುವ ಆಲದ ಮರವಿದ್ದರೂ ಲಿಂಗಕ್ಕೆ ಯಾವುದೇ ರೀತಿಯ ತೊಂದರೆ ಆಗಿಲ್ಲದಿರುವುದು ದೇವರ ಪವಾಡ ಎಂದೇ ಹೇಳಬಹುದು.

ತುಳುವೇಶ್ವರ ನಂದಿ ವಿಗ್ರಹ
ಲಿಂಗದ ಮುಂದಿರುವ ನಂದಿ ವಿಗ್ರಹ

ಗರ್ಭಗುಡಿಯಲ್ಲಿ 2 1/2 ft ಉದ್ದದ ಲಿಂಗವಿದ್ದು ಅದರ ಮುಂದೆ ನಂದಿಯ ವಿಗ್ರಹವಿದೆ. ಗರ್ಭಗುಡಿಯಿಂದ ನೋಡಿದರೆ ನಂದಿಯ ತಲೆ ಮಾತ್ರ ಕಾಣಿಸುತ್ತದೆ. ಸಾವಿರಾರು ವರ್ಷಗಳ ಹಿಂದೆಯೇ ಈ ಲಿಂಗವನ್ನು ಪ್ರತಿಷ್ಟಾಪಿಸಿದ್ದರೂ ಈಗಲೂ ಈ ಲಿಂಗವು ಅಷ್ಟೇ ಸುಂದರವಾಗಿಯೇ ಇದೆ. ಹೊರ ಭಾಗದಲ್ಲಿರುವ ನಂದಿಯ ಪೀಠವನ್ನು ನಿಧಿಯ ಆಸೆಗೋಸ್ಕರ ಕಬ್ಬಿಣದ ಸಲಾಕೆ ಇಂದ ಕೆಡವಲು ಪ್ರಯತ್ನ ಪಟ್ಟಿದ್ದು ಗೋಚರವಾಗುತ್ತದೆ. ನಂದಿಯ ವಿಗ್ರಹ ಸ್ವಲ್ಪ ವಾಲಿರುವುದನ್ನು ಕಾಣಬಹುದಾಗಿದೆ.

ತುಳುವವಶರ ದೇವಸ್ಥಾನ
ತುಳುವೇಶ್ವರ ದೇವಸ್ಥಾನದ ಹೊರ ನೋಟ

ದೇವರಿಗೆ ಪ್ರತಿದಿನ ಪೂಜೆ ಇದ್ದು, ಇದನ್ನು ವಿಠಲ್ ಕಿಣಿ ಕುಟುಂಬದವರು ನಡೆಸುತ್ತಾ ಬಂದಿದ್ದಾರೆ. ಪ್ರಸ್ತುತ ಮಹೇಶ್ ಕಿಣಿ ಇವರು ಪೂಜೆಯನ್ನು ಮಾಡುತ್ತಾರೆ. ಶಿವರಾತ್ರಿಯ ಸಮಯದಲ್ಲಿ ವಿಶೇಷ ಪೂಜೆಗಳು ಇಲ್ಲಿ ನಡೆಯುತ್ತವೆ. ಈ ಸ್ಥಳದ ಜೀರ್ಣೋದ್ಧಾರಕ್ಕೆ ಎಷ್ಟೇ ಪ್ರಯತ್ನಪಟ್ಟರೂ, ದೇವರಲ್ಲಿ ಪ್ರಶ್ನಿಸಿದರೂ, ಹಾಗೆ ದರ್ಶನದಲ್ಲಿ ಕೇಳಿದರೂ ಕೂಡ ಇನ್ನೂ ದೇವರ ಸಮ್ಮತಿ ಸಿಕ್ಕಿಲ್ಲ. ಯೋಗಿಯೊಬ್ಬರ ಮೂಲಕ ಈ ದೇವಸ್ಥಾನದ ಜೀರ್ಣೋದ್ಧಾರ ಆಗುತ್ತದೆ ಎಂಬ ಉತ್ತರ ಸಿಕ್ಕಿದೆ ಎಂದು ಪೂಜಿಸುವ ಅರ್ಚಕರು ಹೇಳುತ್ತಾರೆ.

ಶತ ಶತಮಾನಗಳಿಂದ ಈ ದೇವಾಲಯವು ಹೀಗೆ ಪರಿಸರದ ನಡುವೆ ಇದ್ದರೂ ಕೂಡ ಇಂದಿಗೂ ಭಕ್ತರನ್ನು , ನಂಬಿದವರನ್ನು ಕೈಬಿಡದೆ ಕಾಪಾಡುತ್ತಾ ಬಂದಿರುವುದು ಇಲ್ಲಿನ ವಿಶೇಷ.

ಇದನ್ನೂ ಓದಿ: ಗುಳಿ ಗುಳಿ ಶಂಕರ

ತುಳುವೇಶ್ವರ ದೇವಸ್ಥಾನದ ವಿಡಿಯೋ ನೋಡಿ:

1 Trackback / Pingback

  1. ಬೃಹದೀಶ್ವರ ದೇವಾಲಯ - 81 ಟನ್ಗಳಷ್ಟು ದೊಡ್ಡ ಕಲಶವನ್ನು ಹೊಂದಿದೆ! - Mr and Mrs Kamath

Leave a Reply

Your email address will not be published.


*